Articles Category

ಮಣ್ಣಿನ ನಿರ್ವಹಣೆ: Soil Managment

soil management

ಮಣ್ಣಿನ ನಿರ್ವಹಣೆ: Soil Managment in kannada

ಆರೋಗ್ಯ ಉತ್ತಮವಾಗಿರಬೇಕಾದರೆ ಆಹಾರ ಅತ್ಯುತ್ತಮವಾಗಿರಬೇಕು, ಆದರೆ ಅತ್ಯುತ್ತಮ ಆಹಾರದ ಮೂಲ ಯಾವುದು ಎಂದು ಯೋಚಿಸಿಬೇಕಾಗುತ್ತದೆ. ಪಂಚಭೂತಗಳಲ್ಲಿ ಒಂದಾದ ಮಣ್ಣು ಜೀವಸಂಕುಲಕ್ಕೆ ಪ್ರಕೃತಿ ಕೊಡುಗೆಯಾಗಿ ಕೊಟ್ಟಿರುವ ಅತ್ಯಂತ ಬೆಲೆಬಾಳುವ ಸಂಪತ್ತು. ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲಕ್ಕೂ ಮಣ್ಣೇ ಆದಾರ. ಅದಕ್ಕೇ ಅಲ್ಲವೇ ಪುರಂದರದಾಸರು ಹೇಳಿರುವುದು “ಮಣ್ಣಿಂದ ಕಾಯ, ಮಣ್ಣಿನಿಂದ ಜೀವ, ಮಣ್ಣ ಬಿಟ್ಟವರಿಗೆ ಆದಾರವಿಲ್ಲ“ ಎಂದು. ಹೌದು, ನಾವು ಮಾಡುವ ಪ್ರತಿಯೊಂದು ಕಾರ‍್ಯಕ್ಕೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಣ್ಣೇ ಮೂಲ ಆದಾರ ಎಂದರೆ ತಪ್ಪಿಲ್ಲ. ಇತಿಹಾಸದ ಪುಟಗಳಲ್ಲಿ ಕಾಣ ಸಿಗುವ ಹಲವಾರು ಸಂಘರ್ಷಗಳು, ಯುದ್ದಗಳು ಎಲ್ಲವೂ ನಡೆದಿರುವುದು ಮಣ್ಣಿಗಾಗಿಯೇ. ಜೀವಜಗತ್ತಿನ ವಿಸ್ಮಯಗಳಲ್ಲಿ ಒಂದಾದ ಮಣ್ಣಿನ ಜೊತೆ ನಮಗೊಂದು ಬಾವನಾತ್ಮಕ ಸಂಬಂದವಿದೆ. ಏಕೆಂದರೆ, ನಾವು ಬೇಡ ಎಂದು ಬಿಟ್ಟರೂ ಮಣ್ಣು ನಮ್ಮನ್ನು ಬಿಡುವ ಮಾತೇ ಇಲ್ಲ. ಎಷ್ಟೇ ಶ್ರೀಮಂತನಾಗಲಿ ಪ್ರಭಾವಿ ವ್ಯಕ್ತಿಯಾಗಲಿ ಕೊನೆಗೆ ಸೇರಬೇಕಾಗಿರುವುದು ಮಣ್ಣಿಗೇ ಎನ್ನುವುದು ಕಹಿ ಸತ್ಯ ಅಲ್ಲವೇ? 

ನಾವು ಸೇವಿಸುವ ಆಹಾರವನ್ನು ಬೆಳೆಯಲು, ತೊಡುವ ಬಟ್ಟೆಗೆ, ವಾಸಿಸುವ ಮನೆಗೆ ಎಲ್ಲದಕ್ಕೂ ಆಧಾರವೇ ಮಣ್ಣು. ಹಾಗಾಗಿಯೇ, ನಮ್ಮ ಪೂರ್ವಜರು ಮಣ್ಣನ್ನು ಅತಿಶ್ರೇಷ್ಠ ಮತ್ತು ಪವಿತ್ರ ಎಂದು ಪರಿಗಣಿಸುತ್ತಿದ್ದರು. ನಮ್ಮ ಪೂರ್ವಜರು ಅವರಲ್ಲಿನ ಅನುಭವ, ಜಾಣ್ಮೆ, ತಿಳುವಳಿಕೆ ಮತ್ತು ಸಾಮಾನ್ಯ ಜ್ಞಾನಗಳ ಮೂಲಕ ಮಣ್ಣಿನ ಸಂರಕ್ಷಣೆ ಮಾಡುತ್ತಿದ್ದರು. ಅವರು ಅಳವಡಿಸಿಕೊಳ್ಳುತ್ತಿದ್ದ ವಿಧಾನಗಳನ್ನು ಅನುಸರಿಸುತ್ತಾ ಮಣ್ಣನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಕೂಡ ಹೌದು. ವಿಶ್ವಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ 5 ರನ್ನು ವಿಶ್ವ ಮಣ್ಣಿನ ದಿನ ಎಂದು ಘೋಷಿಸಿದೆ. ಆಹಾರ ಹಾಗೂ ಸುರಕ್ಷಿತ ಭವಿಷ್ಯಕ್ಕಾಗಿ ಆರೋಗ್ಯಕರ ಮಣ್ಣು ಎನ್ನುವ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಆದರೆ , ಇತ್ತೀಚಿಗೆ ಮಣ್ಣಿಗೆ ಕೊಡಬೇಕಾದ ಪ್ರಾದಾನ್ಯತೆ ಕಡಿಮೆಯಾಗುತ್ತಿದೆ. ಮನುಷ್ಯ ಮಣ್ಣಿನ ಮಹತ್ವವನ್ನು ಅರ್ಥ ಮಾಡಿಕೊಳ್ಳದೆ, ಮಣ್ಣಿನಲ್ಲಿರುವ ಜೀವಸತ್ವವನ್ನು ನಾಶಮಾಡುವ ಕಾರ್ಯದಲ್ಲಿ ತೊಡಗಿದ್ದಾನೆ ಎನ್ನುವುದು ದುರಂತ. ಒಂದು ವೇಳೆ ಮಣ್ಣಿನ ಜೀವಸತ್ವಗಳು ನಾಶವಾದರೆ ಅದನ್ನ ಮರುಪೂರಣ ಮಾಡಲು ವರ್ಷಗಟ್ಟಲೇ ಸಮಯ ಬೇಕಾಗಬಹುದು, ಅಥವಾ ಮರುಪೂರಣ  ಸಾದ್ಯವಾಗದೇ ಹೋಗಬಹುದು! ಒಟ್ಟಾರೆಯಾಗಿ ಮನುಷ್ಯನ ದುರಾಸೆಗೆ ಮಣ್ಣು ಹಾಳಾಗುತ್ತಿದೆ ಎನ್ನುವುದಂತೂ ನಿಜ. ಆದ್ದರಿಂದ ಮಣ್ಣನ್ನು ಕೇವಲ ವ್ಯಾವಹಾರಿಕ ವಸ್ತುವನ್ನಾಗಿ ಪರಿಗಣಿಸುವುದು ತಪ್ಪು. ಹಾಗಾಗಿ ಕೃಷಿ ಸಂದರ್ಭದಲ್ಲಿ ಪ್ರಕೃತಿಗೆ ಪೂರಕವಾದ ಸಾವಯವ ಗೊಬ್ಬರ ಮಣ್ಣಿಗೆ ಒಳ್ಳೆಯದು. ಅತಿಯಾದ ರಾಸಾಯನಿಕ ಗೊಬ್ಬರದ ಬಳಕೆ ಮಣ್ಣಿನ ಪಲವತ್ತತೆಯನ್ನು ನಾಶಮಾಡಿ ಮಣ್ಣನ್ನು ಬರಡಾಗಿಸುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು. 

ವ್ಯವಸಾಯಕ್ಕೆ ಅಥವಾ ಕೈತೋಟದಲ್ಲಿ ಹೂ ಮತ್ತು ತರಕಾರಿ ಗಿಡಗಳನ್ನು ಬೆಳೆಸಲು ಮಣ್ಣು ಬೇಕೇ ಬೇಕು. ಕೃಷಿಗೆ ಮೊಟ್ಟ ಮೊದಲ ಅವಶ್ಯಕತೆಯೇ ಮಣ್ಣು. ಮೊದಲಿಗೆ, ಯಾವ ಮಣ್ಣಿಗೆ ಯಾವ ರೀತಿಯ ಬೆಳೆ ಸೂಕ್ತ ಎನ್ನುವುದನ್ನು ತಿಳಿದುಕೊಂಡು ಆ ಮಣ್ಣಿಗೆ ಸೂಕ್ತವಾದ ಗಿಡಗಳನ್ನು ನೆಡುವುದು ಜಾಣತನ. ಗುದ್ದಲಿ ಅಥವಾ ಹಾರೆಯಲ್ಲಿ ಮಣ್ಣನ್ನು ಅಗೆದು ಪದರಗಳನ್ನು ಸಡಿಲಗೊಳಿಸಬೇಕು. ಆಗ ಮಾತ್ರವೇ ಗಿಡವು ಆಳವಾಗಿ ಬೇರು ಬಿಡಲು ಸಹಾಯವಾಗುತ್ತದೆ. ಇಲ್ಲವಾದರೆ ಗಿಡ ಸರಿಯಾಗಿ ಬೇರು ಬಿಡದೆ ಗಿಡದ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆಯಿರುತ್ತದೆ.  ಮಣ್ಣಿನಲ್ಲಿರುವ ದೊಡ್ಡ ದೊಡ್ಡ ಕಲ್ಲುಗಳನ್ನು ಬೇರ್ಪಡಿಸಬೇಕಾಗಿರುವುದು ಮೊದಲು ಮಾಡಬೇಕಾದ ಕೆಲಸ. ನೆನಪಿಡಬೇಕಾದ ಮತ್ತೊಂದು ವಿಷಯ ಎಂದರೆ, ಯಾವುದೇ ಗಿಡವನ್ನು ನೆಡುವುದಕ್ಕೆ ಮುನ್ನ ಮಣ್ಣಿಗೆ ಸ್ವಲ್ಪ ಸಾವಯವ ಗೊಬ್ಬರನ್ನು ಸೇರಿಸಿ ಹದಗೊಳಿಸುವುದು ಸೂಕ್ತ.  ಗಿಡ ನೆಡುವುದಕ್ಕಿಂತ ಎರಡು ಮೂರು ದಿನದ ಮುಂಚೆ ಮಣ್ಣಿಗೆ ನೀರು ಹಾಕಿದರೆ ಉತ್ತಮ. ಇದರಿಂದ ಗಿಡಗಳು ಒಣಗಿ ಹೋಗುವ ಅಪಾಯವಿರುವುದಿಲ್ಲ. ನಿಮಗೆ ಸಾಧ್ಯವಾದರೆ, ಮಣ್ಣನ್ನು ಪರೀಕ್ಷೆ ಮಾಡಿಸಿ ನಂತರ ಗಿಡ ನೆಟ್ಟರೆ ಉತ್ತಮ. ಅತೀ ಮುಖ್ಯವಾಗಿ ನೆನಪಿಡಬೇಕಾದ ಇನ್ನೊಂದು ವಿಷಯ ಎಂದರೆ, ರಾಸಾಯನಿಕ ಗೊಬ್ಬರ ಹಾಕಿದರೆ ಮಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಸಹಜ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಗಿಡಗಳಿಗೆ ಸಿಗಬೇಕಾದ ಪೋಷಕಾಂಶ ದೊರೆಯುವ ಜೊತೆಗೆ ಮಣ್ಣಿನ ಸಂರಕ್ಷಣೆಯನ್ನು ಸಹ ಮಾಡಬಹುದು.

ಎಲ್ಲದಕ್ಕಿಂತ ಮುಖ್ಯವಾಗಿ, ಮಣ್ಣಿನ ಗುಣ ವರ್ದಕಗಳ ಸ್ಥಿತಿ ಮತ್ತು ಮಣ್ಣಿನ ಸಂರಕ್ಷಣೆ ವಿಧಾನಗಳ ಬಗ್ಗೆ ತಿಳುವಳಿಕೆ ಹೊಂದಿದವರು ಕೃಷಿಯಲ್ಲಿ ಅದ್ಬುತ ಸಾದನೆ ಮಾಡುವ ಸಾಧ್ಯತೆ ಹೆಚ್ಚು. ಉತ್ತಮ ಬೆಳೆಗೆ ಅವಶ್ಯಕವಿರುವ ಪೋಶಕಾಂಶಗಳನ್ನು ಪೂರೈಕೆ ಮಾಡುವುದರ ಫಲವೇ ಉತ್ತಮ ಇಳುವರಿ. ಸಮಗ್ರ ಬೆಳೆ, ಮಿಶ್ರಬೆಳೆ, ಸಾವಯವ ಕೃಷಿ ಮುಂತಾದ ಸಹಜ ಕೃಷಿ ಆದಾರಿತ ಪದ್ದತಿಗಳು ಮಣ್ಣಿನ ಸಾರವನ್ನು ಹೆಚ್ಚಿಸುವುದರ ಜೊತೆಗೆ ಆಹಾರದ ಗುಣಮಟ್ಟವನ್ನು ಕೂಡ ಉನ್ನತ ಮಟ್ಟದಲ್ಲಿಡುತ್ತವೆ. ಹಾಗಾಗಿ ಪ್ರಕೃತಿ ಕಾಲಚಕ್ರ ನಿಯಮದಂತೆ ಮತ್ತೊಮ್ಮೆ ಸಹಜ ಕೃಷಿಯನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ನಮ್ಮ ಮುಂದಿನ ಜನಾಂಗದ ಸಲುವಾಗಿಯಾದರೂ ಮಣ್ಣಿನ ಸಮಗ್ರ ನಿರ್ವಹಣೆ ಮತ್ತು ಸಂರಕ್ಷಣೆ ಅತ್ಯಗತ್ಯವಾಗಿದೆ. ಹಾಗಾದರೆ ಮಣ್ಣಿನ ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ಪರಿಣಾಮಕಾರಿ ವಿಧಾನಗಳು ಯಾವುವು ಎನ್ನುವುದನ್ನು ಮುಂದಿನ ಭಾಗದಲ್ಲಿ ತಿಳಿಯೋಣ… 

ಇದನ್ನು ಓದಿ … ಸಹಜ ಕೃಷಿಯಲ್ಲಿ ಕಳೆ ನಿರ್ವಹಣೆ ! Weed management in organic farming

ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.

Leave a Reply

Your email address will not be published. Required fields are marked *