Articles Category

ಸಹಜ ಕೃಷಿಯಲ್ಲಿ ನೀರಿನ ಪಾತ್ರ  ! Role of water in organic farming

ಸಹಜ ಕೃಷಿಯಲ್ಲಿ ನೀರಿನ ಪಾತ್ರ  ! Role of water in organic farming

ಸಹಜ ಕೃಷಿಯಲ್ಲಿ ನೀರಿನ ಪಾತ್ರ  ! Role of water in organic farming

organic farming – ಜಮೀನಿನಲ್ಲಿ ಬೆಳೆದ ಸಸ್ಯಗಳು ಅಥವಾ ಬೆಳೆಗಳಿಗೆ ಕೃತಕವಾಗಿ ನೀರನ್ನು ಪೂರೈಸುವ ವಿಧಾನವನ್ನೇ ನೀರಾವರಿ ಎಂದು ಕರೆಯಲಾಗುತ್ತದೆ. ಬೇಸಾಯಕ್ಕೆ ಮಳೆನೀರನ್ನು ಮಾತ್ರ ಆಶ್ರಯಿಸದೆ, ಇತರ ನೈಸರ್ಗಿಕ ಮೂಲಗಳಾದ ನದಿ, ಸರೋವರ, ತೋಡುಬಾವಿಗಳಿಂದ ನೀರನ್ನು ಒದಗಿಸುವುದೇ ನೀರಾವರಿಯ ಮುಖ್ಯ ಉದ್ದೇಶ. ನೀರಾವರಿಯ ಪ್ರಮುಖ ಅವಶ್ಯಕತೆ ಎಂದರೆ, ನೀರಿನ ಮೂಲ (ಜಲಾಶಯ) ಮತ್ತು ಸಂಗ್ರಹಿತ ಜಲವನ್ನು ನಿರ್ದಿಷ್ಟ ಭೂಮಿಗೆ ಹರಿಸಲು ಕಾಲುವೆಗಳ ವ್ಯವಸ್ಥೆ. 

ಇನ್ನು, ನೀರಿನ ಬಳಕೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಸೂಕ್ತವಾದ ನೀರಾವರಿ ಪದ್ದತಿಗಳನ್ನು ಮತ್ತು ವಿನ್ಯಾಸಗಳನ್ನು ಆಯಾ ಬೆಳೆಗಳಿಗೆ ಹಾಗೂ ಪ್ರದೇಶಕ್ಕೆ ತಕ್ಕಂತೆ ಅಳವಡಿಸಬೇಕು. ಆಗ ಮಾತ್ರ ಬೆಳೆಗಳ ಇಳುವರಿ ಹೆಚ್ಚಳ ಸಾಧ್ಯವಾಗುತ್ತದೆ. 

ನೀರಾವರಿ ಪದ್ದತಿಗಳು ಮತ್ತು ವಿನ್ಯಾಸಗಳು ! Irrigation systems and designs

ನೀರಾವರಿಯನ್ನು ಆಯಾ ಬೆಳೆಗಳಿಗೆ ಅನುಗುಣವಾಗಿ ಬೇರೆ ಬೇರೆ ಪದ್ದತಿಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳಬಹುದು. ಸೂಕ್ತವಾದ ನೀರಾವರಿ ಪದ್ಧತಿಯನ್ನು ಅನುಸರಿಸುವುದರಿಂದ ನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇನ್ನು, ನೀರಾವರಿ ಪದ್ಧತಿಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ:

  1. ಪಾತಳಿ  ನೀರಾವರಿ ಪದ್ಧತಿ ಎಂದರೆ ಭೂಮಿಯ ಮೇಲ್ಪದರದ ಮೇಲೆ ನೀರು ಹರಿಸುವುದು
  2. ಏರಿಯಲ್ ನೀರಾವರಿ ಪದ್ಧತಿ ಎಂದರೆ ನೀರನ್ನು ಮೇಲಿನಿಂದ ಜಮೀನಿಗೆ ಚಿಮುಕಿಸುವುದು

ಇದರಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ:  ತುಂತುರು ನೀರಾವರಿ ಮತ್ತು ಹನಿ ನೀರಾವರಿ ಪದ್ಧತಿ. 

ಪಾತಳಿ ನೀರಾವರಿ ಪದ್ಧತಿ : ಈ ಪದ್ಧತಿಯಲ್ಲಿ ಗುರುತ್ವಾಕರ್ಷಣಾ ಶಕ್ತಿಯ ಸಹಾಯದಿಂದ,  ಭೂಮಿಯ ಮೇಲ್ಭಾಗದಲ್ಲಿ ನೀರಿನ ಕಾಲುವೆಗಳ ಮೂಲಕ ನೀರನ್ನು ಹರಿಸಿ ತಂದು ಬೆಳೆಗಳಿಗೆ ನೀರುಣಿಸುವ ವಿಧಾನ. 

ಈ ಪದ್ದತಿಯ ಅನುಕೂಲತೆಗಳು: ಈ ಪದ್ಧತಿಯನ್ನು ರೈತರು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇದು ಬೇರೆ ಪದ್ಧತಿಗಳಿಗೆ ಹೋಲಿಸಿದರೆ ಖರ್ಚಿನಲ್ಲಿ ಕಡಿಮೆ. ಅನುಕೂಲಕ್ಕೆ ತಕ್ಕಂತೆ ಪಾತಿಗಳ ಗಾತ್ರ ಮತ್ತು ಆಕಾರಗಳನ್ನು ಗಣನೆಗೆ ತೆಗೆದುಕೊಳ್ಳಬಹುದು.ಭೂಮಿಯನ್ನು ಸಾಧ್ಯವಾದಷ್ಟು ಮಟ್ಟಮಾಡಿ, ಬದುಗಳನ್ನು ಹಾಕಿ, ಮಣ್ಣು ಮತ್ತು ಬೆಳೆಗಳ ಗುಣಧರ್ಮಕ್ಕೆ ಸೂಕ್ತವಾದ ನೀರಾವರಿ ವಿನ್ಯಾಸಗಳನ್ನು ತಯಾರುಮಾಡಿ ನೀರು ಕೊಡಬೇಕಾಗುತ್ತದೆ. ಈ ರೀತಿ ಮಾಡುವುದರಿಂದ ನೀರಿನ ಸದ್ಬಳಕೆಯ ಜೊತೆ ಬೆಳೆಗೂ ಅನುಕೂಲ. 

ಪಾತಳಿ ನೀರಾವರಿ ಪದ್ಧತಿಯಲ್ಲಿನ ವಿನ್ಯಾಸಗಳು ! Designs in Subsurface Irrigation System

ಪಾತಳಿ ನೀರಾವರಿ ಪದ್ಧತಿಯಲ್ಲಿ ಈ ಕೆಳಕಂಡ ವಿನ್ಯಾಸಗಳನ್ನು, ಸೂಕ್ತವಾದ ಬೆಳೆಗಳು ಮತ್ತು ಮಣ್ಣಿಗೆ ಆಧಾರದ ಮೇಲೆ ಆಯ್ಕೆ ಮಾಡಬೇಕಾಗುತ್ತದೆ.

ಬದುಪಟ್ಟಿ ನೀರಾವರಿ:  ಭೂಮಿಯನ್ನು ಸಮಾನಾಂತರ ಪಟ್ಟಿಗಳಾಗಿ ವಿಭಾಗಿಸಿ, ಸಣ್ಣ ಬದುಗಳನ್ನು ಹಾಕಿ, ಪಟ್ಟಿಗಳ ಮಧ್ಯದಲ್ಲಿ ಸಮತಟ್ಟು ಮಾಡುವ ವಿಧಾನ. ಎರಡು ಬದುಗಳ ನಡುವೆ ತೆಳುವಾಗಿ ಮತ್ತು ಸಾವಕಾಶವಾಗಿ ನೀರು ಹರಿದು ಹೋಗುವಂತೆ ಪಟ್ಟಿಯನ್ನು ಮಟ್ಟ ಮಾಡಬೇಕಾಗುತ್ತದೆ. ಪಟ್ಟಿಯ ಉದ್ದಕ್ಕೂ ಸ್ವಲ್ಪ ಇಳಿಜಾರಿನ ರೀತಿ ಇರಬೇಕು.ಈ ನೀರಾವರಿ ವಿನ್ಯಾಸವನ್ನು ಸಾಧಾರಣ ಉಪಕರಣಗಳನ್ನು ಬಳಸಿ ನಿರ್ಮಿಸಬಹುದು ಮತ್ತು ಇಲ್ಲಿ ನೀರಿನ ಬಳಕೆ ಸಮರ್ಪಕವಾಗಿರುತ್ತದೆ.ಈ ಪದ್ಧತಿಯು ಗೋಧಿ, ಜೋಳ, ಮುಸುಕಿನ ಜೋಳ, ಹತ್ತಿ, ಕಬ್ಬು, ದ್ವಿದಳ ಧಾನ್ಯಗಳು, ನೆಲಗಡಲೆ, ಮಾವು ಮುಂತಾದ ಬೆಳೆಗಳಿಗೆ ಬಹಳ ಸೂಕ್ತವಾಗಿದೆ. ಬದು ಪಟ್ಟಿಗಳ ಮೂಲಕ ನೀರುಣಿಸಿದರೆ, ನೀರಾವರಿ ಸಾಮರ್ಥ್ಯವನ್ನು ಸುಮಾರು ಶೇ. 65 ರಿಂದ 70 ರಷ್ಟು ಸಾಧಿಸಬಹುದು.

ಚೌಕಿ ಪಾತಿ ಅಥವಾ ಮಡಿ ನೀರಾವರಿ: 

ಇದು ಕೂಡ ಒಂದು ಉತ್ತಮ ನೀರುಣಿಸುವ ವಿನ್ಯಾಸ. ನೀರು ಇಂಗುವ ಪ್ರಮಾಣ ಕಡಿಮೆಯಾಗಿರುವ ಮತ್ತು ಸಮನಾದ ಸ್ವಲ್ಪ ಮಟ್ಟಿನ ಇಳಿಜಾರುಳ್ಳ ಭೂಮಿಗೆ ಉತ್ತಮ ಪದ್ಧತಿಯೇ ಸರಿ. ಈ ಪದ್ಧತಿಯಿಂದ ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ನೀರು ಒಂದೇ ಸಮನಾಗಿ ಇಂಗುತ್ತದೆ. ನೀರು ಪೋಲಾಗುವುದಿಲ್ಲ. ನೀರನ್ನು ಹಾಯಿಸುವ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಎಂದರೆ ಸುಮಾರು ಶೇ. 70 ರಿಂದ 75 ರಷ್ಟು. ಇದನ್ನು ನಿರ್ಮಿಸುವ ವಿಧಾನವೆಂದರೆ, ಪ್ರತೀ ಮಡಿಗೂ ಸುತ್ತಲೂ ಸಣ್ಣ ಬದು ಹಾಕಿ ಭೂಮಿಯನ್ನು ಮಟ್ಟ ಮಾಡಬೇಕು. ಒಂದು ಮಡಿಯಲ್ಲಿ ನೀರನ್ನು ತುಂಬಿದ ಮೇಲೆ ಅದು ಇಂಗಿದ ನಂತರ ಮುಂದಿನ ಮಡಿಗೆ ನೀರು ಬಿಡಬೇಕು. ಈ ವಿನ್ಯಾಸವನ್ನು ಮುಖ್ಯವಾಗಿ ಭತ್ತಕ್ಕೆ ನೀರುಣಿಸಲು ಅನುಸರಿಸಬಹುದು. ಇತರೆ ಬೆಳೆಗಳಾದ ಗೋಧಿ, ಮುಸುಕಿನ ಜೋಳ, ಧಾನ್ಯಗಳು, ಎಣ್ಣೆಕಾಳು ಬೆಳೆಗಳು ಮತ್ತು ಮೇವಿನ ಬೆಳೆಗಳಿಗೂ ಈ ವಿಧಾನ ಸೂಕ್ತವಾಗಿದೆ. 

ಸಾಲು ಬೋದು ಅಥವಾ ದೋಣಿ-ದಿಣ್ಣೆ ನೀರಾವರಿ: 

ಇದು ಕೂಡ ಶಿಫಾರಸ್ಸು ಮಾಡಿರುವ ಪದ್ಧತಿ. ಇದನ್ನು ಸಾಲು ಬೆಳೆಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಸಾಲುಗಳ ಅಂತರ ಹೆಚ್ಚಾಗಿರುವ ಮೆಣಸಿನಕಾಯಿ, ಟೊಮ್ಯಾಟೋ, ಬದನೆ, ಕಬ್ಬು, ತೊಗರಿ, ಮುಸುಕಿನ ಜೋಳ, ಸೂರ್ಯಕಾಂತಿ ಮತ್ತು ಹತ್ತಿ ಮುಂತಾದ ಬೆಳೆಗಳಿಗೆ ಈ ವಿನ್ಯಾಸ ಸೂಕ್ತವಾಗಿದೆ. ಜಮೀನಿನಲ್ಲಿ ದೋಣಿ-ದಿಣ್ಣೆಗಳನ್ನು ಸೂಕ್ತ ಅಂತರದಲ್ಲಿ ನಿರ್ಮಿಸಿ ಪ್ರತಿ ದೋಣಿಗೆ ನೀರನ್ನು ಹಾಯಿಸಬೇಕು.ದೋಣಿ-ದಿಣ್ಣೆಗಳನ್ನು ಸಮತಟ್ಟಾದ ಕ್ಷೇತ್ರಗಳಲ್ಲಿ ನೇರವಾಗಿ ಮತ್ತು ಇಳಿಜಾರು ಕ್ಷೇತ್ರದಲ್ಲಿ ಸಮಪಾತಳಿಯಾಗಿ ನಿರ್ಮಿಸಿ ನೀರನ್ನು ಹಾಯಿಸುವುದು ಸೂಕ್ತ ವಿಧಾನ. ಈ ಪದ್ದತಿಯನ್ನು ಮೂಲಕ, ನೀರು ಪೋಲಾಗದಂತೆ ಮಿತವಾಗಿ ಬಳಸಬಹುದು. ನೀರಾವರಿ ಸಾಮರ್ಥ್ಯ ಸುಮಾರು ಶೇ. 75 ರಿಂದ 80 ರಷ್ಟಿರುತ್ತದೆ. ಹೆಚ್ಚು ತೇವಾಂಶ ತಡೆಯಲಾರದ ಬೆಳೆಗಳಿಗೆ ಎಂದರೆ ಟೊಮ್ಯಾಟೋ, ಮುಸುಕಿನ ಜೋಳ ಮತ್ತು ದ್ವಿದಳ ಧಾನ್ಯಗಳು ಈ ಪದ್ಧತಿಯಿಂದ ನೀರುಣಿಸುವುದು ಬಹಳ ಉತ್ತಮ.ಈ ವಿಧಾನದಲ್ಲಿ ಬೆಳೆಗಳ ಬೇರಿಗೆ ಸೂಕ್ತ ಪ್ರಮಾಣದಲ್ಲಿ ತೇವಾಂಶ ಮತ್ತು ಗಾಳಿ ಸಿಗುತ್ತವೆ. ಅಂತರ ಬೇಸಾಯವನ್ನೂ ಸಹ ಸುಲಭವಾಗಿ ಮಾಡಬಹುದು. ಬೆಳೆಗಳ ಇಳುವರಿ ಹೆಚ್ಚಾಗುತ್ತದೆ.

ನೀರಿಗೆ ನೀರಾವರಿ: 

ಈ ವಿನ್ಯಾಸ ಕೂಡ ತರಕಾರಿ ಬೆಳೆಗಳಲ್ಲಿ ಹೆಚ್ಚಿನ ಬಳಕೆಯಲ್ಲಿದೆ. ಸಾಲಿನ ಅಂತರ ಕಡಿಮೆ ಇರುವ ಸಣ್ಣ ಕಾಳಿನ ಬೆಳೆಗಳು ಮತ್ತು ತರಕಾರಿ ಬೆಳೆಗಳಾದ ಈರುಳ್ಳಿ, ಬೆಳ್ಳುಳ್ಳಿ, ಕೋಸು, ಮೂಲಂಗಿ, ಹುರಳಿಕಾಯಿ, ಸೊಪ್ಪುಗಳು ಮತ್ತು ಹುಲ್ಲು ಬೆಳೆಗಳಿಗೆ ಈ ಪದ್ಧತಿ ಉತ್ತಮವಾಗಿದೆ.  ಈ ಪದ್ದತಿಯನ್ನು ನೀರಿನ ಪ್ರಮಾಣ ಕಡಿಮೆ ಇರುವಲ್ಲಿ ಅಳವಡಿಸಬಹುದು. ಇದರಲ್ಲಿ ಒಂದೇ ಮಟ್ಟವಾಗಿರುವ ಸಾಲುಗಳ ಮೂಲಕ ನೀರಾವರಿ ಮಾಡುವುದು. ಬದುಪಟ್ಟಿ ನೀರಾವರಿಯಲ್ಲಿಯೂ ಸಹ ಈ ಪದ್ಧತಿಯನ್ನು ಅಳವಡಿಸಿ ನೀರನ್ನು ಸಮವಾಗಿ ಹರಡುವಂತೆ ಮಾಡಬಹುದು.

ವೃತ್ತಾಕಾರದ ಗುಂಡಿ ನೀರಾವರಿ: 

ನೀರು ನಿಲ್ಲಲು ಸ್ವಲ್ಪ ಆಳದ ತಗ್ಗುಗಳನ್ನು ಮಾಡಿ ಸುತ್ತಲೂ ಸಣ್ಣ ಸಣ್ಣ ಕಟ್ಟೆ ಅಥವಾ ಬದುಗಳನ್ನು ಕಟ್ಟಿ ಆಯಾ ಬೆಳೆಯ ವಯಸ್ಸು ಮತ್ತು ಗಾತ್ರಕ್ಕೆ ತಕ್ಕಷ್ಟು ನೀರನ್ನು ಹರಿಸುವುದನ್ನು ವೃತ್ತಾಕಾರದ ಗುಂಡಿ ನೀರಾವರಿ ಎಂದು ಕರೆಯಲಾಗುತ್ತದೆ.  ಈ ಪದ್ಧತಿಯಲ್ಲಿ ಹಣ್ಣಿನ ಗಿಡಗಳ ಹಾಗೂ ಮರಗಳ ಬುಡದ ಸುತ್ತಲೂ ಭೂಮಿಯನ್ನು ಮಟ್ಟಮಾಡಿ ಪ್ರತಿಯೊಂದು ಬುಡದ ಸುತ್ತಲೂ ಮಣ್ಣನ್ನು ಏರಿಸಬೇಕು. ಈ ವಿಧಾನ, ಹಣ್ಣಿನ ಮರಗಳ ಬುಡಕ್ಕೆ ನೇರವಾದ ನೀರಿನ ಸಂಪರ್ಕವಾಗದಂತೆ ತಡೆಯುತ್ತದೆ. ಸಾಮಾನ್ಯವಾಗಿ ಹಣ್ಣಿನ ಬೆಳೆಗಳಿಗೆ ಇದು ಒಳ್ಳೆಯ ಪದ್ಧತಿ. ಈ ಪದ್ಧತಿಯಲ್ಲಿ ನೀರು ಸಮವಾಗಿ ಮಣ್ಣಿನಲ್ಲಿ ಇಂಗಿ, ಬೇರುಗಳಿಗೆ ಲಭ್ಯವಾಗುತ್ತದೆ. ಈ ಪದ್ಧತಿಯಲ್ಲಿ ನೀರು ಪೋಲಾಗುವುದಿಲ್ಲ ಎನ್ನುವುದು ವಿಶೇಷ. ಈ ಪದ್ಧತಿಯಲ್ಲಿ, ಸುಮಾರು ಶೇ. 80 ರಷ್ಟು ನೀರಾವರಿ ಸಾಮರ್ಥ್ಯವನ್ನು ಸಾಧಿಸಬಹುದು. ಈ ಪದ್ಧತಿಯಲ್ಲಿ, ಬೆಳೆಗಳ ಬೇರುಗಳಿಗೆ ಉತ್ತಮ ಪ್ರಮಾಣದಲ್ಲಿ ಗಾಳಿ ಮತ್ತು ನೀರು ಲಭ್ಯವಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. 

ಏರಿಯಲ್ ನೀರಾವರಿ ಪದ್ಧತಿ

ಈ ಪದ್ಧತಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಎನ್ನುವ ಎರಡು ವಿಧಗಳಿದ್ದು, ಇವುಗಳಲ್ಲಿ ಹನಿ ನೀರಾವರಿ ಪದ್ಧತಿ ಬಹಳ ಜನಪ್ರಿಯವಾಗಿದೆ. 

ಹನಿ ನೀರಾರಿ ಪದ್ಧತಿ: 

ನೀರನ್ನು ಹನಿಹನಿಯಾಗಿ ಬೇರಿನ ಜಾಗದಲ್ಲಿ ನಿರಂತರವಾಗಿ ಒದಗಿಸುವುದಕ್ಕೆ ಹನಿ ನೀರಾವರಿ ಪದ್ಧತಿ ಎಂದು ಕರೆಯಲಾಗುತ್ತದೆ. ಇತರೆ ನೀರಾವರಿ ಪದ್ಧತಿಗಳಲ್ಲಿ ನೀರು ಬೇರಿನ ವಲಯಕ್ಕಿಂತ ಆಳವಾಗಿ ಇಂಗುವುದು ಮತ್ತು ಆವಿಯಾಗಿ ಹೋಗುವುದರಿಂದ ಆಗುವ ನಷ್ಟವನ್ನು ಈ ಪದ್ಧತಿಯಿಂದ ಕಡಿಮೆ ಮಾಡಬಹುದು.ನೀರಿನ ಕೊರತೆಯಿರುವ ಮತ್ತು ಕ್ಷಾರಯುಕ್ತ ಮಣ್ಣಿನ ಪ್ರದೇಶಗಳಲ್ಲಿ ಈ ಪದ್ಧತಿಯು ಬಹಳ ಸೂಕ್ತವಾಗಿದೆ.ಈ ವಿಧಾನದಲ್ಲಿ, ನೀರು ಹನಿಸುವ ಸಾಧನಗಳುಳ್ಳ ಕಡಿಮೆ ವ್ಯಾಸದ ಪ್ಲಾಸ್ಟಿಕ್ ಕೊಳವೆಗಳನ್ನು ಬಳಸಿ ನೀರುಣಿಸಬೇಕು.ಈ ಪದ್ಧತಿಯಲ್ಲಿ ಕೇವಲ ಶೇ. 10 ರಷ್ಟು ಮಾತ್ರ ನೀರು ಪೋಲಾಗಿ, ಶೇ. 90 ರಷ್ಟು ನೀರು ಸಸ್ಯಗಳಿಗೆ ದೊರಕಿ ಲಭ್ಯವಿರುವ ನೀರಿನ ಹೆಚ್ಚಿನ ಸಾಮರ್ಥ್ಯ ಬಳಕೆಯಾಗುತ್ತದೆ.ಪಾತಳಿ ನೀರಾವರಿಯಲ್ಲಿ ಒಂದು ಎಕರೆ ಉಪಯೋಗಿಸುವಷ್ಟು ನೀರನ್ನು ಹನಿ ನೀರಾವರಿ ಪದ್ಧತಿಯಲ್ಲಿ 2 ರಿಂದ 3 ಎಕರೆಗೆ ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಇದರಲ್ಲಿ ಎಕರೆವಾರು ಬೆಳೆಯ ಇಳುವರಿ ಶೇ. 50 ರಿಂದ 100 ರಷ್ಟು ಹೆಚ್ಚಾಗುತ್ತದೆ. ಈ ಪದ್ಧತಿಯ ಅಳವಡಿಕೆಗೆ ಪ್ರಾರಂಭದಲ್ಲಿ ಸ್ವಲ್ಪ ಹೆಚ್ಚಿನ ಖರ್ಚು ಬರುತ್ತಾದರೂ ಸರ್ಕಾರದಿಂದ ಸಹಾಯಧನ ದೊರೆಯುವ ಅವಕಾಶವಿದೆ. 

ತುಂತುರು ನೀರಾವರಿ ಪದ್ಧತಿ: 

ಇದು ಮಳೆಯಂತೆ ನೀರಾವರಿ ಮಾಡುವ ತಂತ್ರವಾಗಿದೆ. ಅಂದರೆ ಮಳೆಯಲ್ಲಿ ಗಿಡಗಳು ಮತ್ತು ಬೆಳೆಗಳಿಗೆ ಹೇಗೆ ನೀರು ಸಿಗುತ್ತದೆಯೋ ಅದೇ ರೀತಿ ತುಂತುರು ನೀರಾವರಿಯಲ್ಲೂ ನೀರು ನೀಡಲಾಗುತ್ತದೆ. ಈ ತಂತ್ರವನ್ನು ಸ್ಪ್ರಿಂಕ್ಲರ್ ನೀರಾವರಿ ಎಂದೂ ಕರೆಯುತ್ತಾರೆ. ಇದರಲ್ಲಿ ಕೊಳವೆ ಬಾವಿ ಅಥವಾ ಕೊಳದಿಂದ ಪೈಪ್‌ಗಳ ಮೂಲಕ ಹೊಲಕ್ಕೆ ನೀರು ತೆಗೆದುಕೊಳ್ಳಲಾಗುತ್ತದೆ. ಇದರ ನಂತರ, ಕೊಳವೆಯನ್ನು ತೋಟದಲ್ಲಿ ಹಾಕಲಾಗುತ್ತದೆ. ಆ ನಳಿಕೆಯಿಂದ ನೀರು ಬಂದು ಬೆಳೆಗಳ ಮೇಲೆ ಬೀಳುತ್ತದೆ. ಇನ್ನು, ಯಾವುದೇ ನೀರಾವರಿ ಪದ್ಧತಿಯಲ್ಲಿ ಬೆಳೆಗಳ ಅವಶ್ಯಕತೆಗೆ ತಕ್ಕಂತೆ ನೀರುಣಿಸುವುದು ಮುಖ್ಯವಾಗಿರುತ್ತದೆ. ಮಿತಬಳಕೆಯ ವಿಧಾನಗಳನ್ನು ಅನುಸರಿಸಿ ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಬೇಕು, ಆದಕಾರಣ ಎಷ್ಟು ಬೇಕೋ ಅಷ್ಟೇ ನೀರು ಬಳಸುವುದು ಮುಖ್ಯ. ನೀರನ್ನು ಕೊಡಬೇಕಾದ ಸಮಯ, ಅದರ ಪ್ರಮಾಣವನ್ನು ಅರಿಯುವುದು ಮುಖ್ಯ. ಜೊತೆಗೆ ನೀರಿನ ಬಳಕೆ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದೇ ರೀತಿ, ಮಣ್ಣಿನ ಗುಣಧರ್ಮವೂ ಮುಖ್ಯವಾಗುತ್ತದೆ. ಭೂಮಿಗೆ ಸಾಕಷ್ಟು ಮಳೆ ನೀರು ಅಥವಾ ನೀರಾವರಿ ನೀರನ್ನು ಕೊಟ್ಟು ನೀರು ಇಂಗಿದ ಮೇಲೆ 2 ದಿವಸಗಳ ನಂತರ ಕೆಂಪು ಮಣ್ಣಿನಲ್ಲಿ, ಅಥವಾ 3 ದಿವಸಗಳ ನಂತರ ಕಪ್ಪು ಮಣ್ಣಿನಲ್ಲಿ ಉಳಿಯುವ ತೇವಾಂಶದ ಪ್ರಮಾಣವನ್ನು ನೀರು ಹಿಡಿದಿಟ್ಟುಕೊಳ್ಳುವ ಮಣ್ಣಿನ ಶಕ್ತಿ ಎನ್ನಬಹುದು. ಈ ಸಮಯದಲ್ಲಿ ಮಣ್ಣಿನಲ್ಲಿ ಅಗತ್ಯ ಪ್ರಮಾಣದಷ್ಟು ನೀರು ಇರುತ್ತದೆ.

ನಂತರದ 10-15 ದಿವಸಗಳಲ್ಲಿ ಮಣ್ಣಿನಲ್ಲಿ ತೇವಾಂಶ ತುಂಬಾ ಕಡಿಮೆಯಾಗಿ ಈ ತೇವಾಂಶವನ್ನು ಹೀರುವಷ್ಟು ಶಕ್ತಿ ಬೆಳೆಗಳಿಗಿರುವುದಿಲ್ಲ. ಕಾರಣ ತೇವಾಂಶ ದೊರೆಯುವಿಕೆಯು ಬೇರುಗಳಿಗೆ ಕಡಿಮೆಯಾಗಿ ಬೆಳೆಗಳು ಒಣಗುತ್ತವೆ. ಮತ್ತೆ ನೀರುಣಿಸದೆ ಇದ್ದರೆ ಬೆಳೆಗಳು ಪೂರ್ತಿಯಾಗಿ ಒಣಗುತ್ತದೆ.ಹಾಗಾಗಿ, ವಿವಿಧ ಬೆಳೆಗಳಲ್ಲಿ ಬೇರುಗಳ ಆಳ, ಸಾಂದ್ರತೆ ಮತ್ತು ನೀರನ್ನು ಹೀರುವ ಕ್ರಮವನ್ನು ತಿಳಿದು ನೀರುಣಿಸುವುದು ಕೃಷಿಯಲ್ಲಿ ಮುಖ್ಯವಾಗಿರುತ್ತದೆ. ಬೆಳೆಗಳು ತಮಗೆ ಬೇಕಾಗುವ ನೀರನ್ನು ಭೂಮಿಯ ಆಳದಿಂದ ಬೇರಿನ ಸಹಾಯದಿಂದ ತೆಗೆದುಕೊಳ್ಳುವುದು. ಈ ಆಳವು ಬೇರೆ ಬೇರೆ ಬೆಳೆಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ತರಕಾರಿ ಬೆಳೆಗಳಲ್ಲಿ 1.5 ಅಡಿಯಾಗಿದ್ದರೆ, ಗೋಧಿ, ಮುಸುಕಿನ ಜೋಳ ಮುಂತಾದ ಏಕದಳ ಧಾನ್ಯಗಳಲ್ಲಿ 2 ರಿಂದ 4 ಅಡಿ ಮತ್ತು ಹಣ್ಣಿನ ಗಿಡಗಳಲ್ಲಿ 6 ಅಡಿಗಳಿಗೆ ಮೇಲ್ಪಟ್ಟು ಇರಬಹುದು.

ಇದನ್ನು ಓದಿ… ಸಹಜ ಕೃಷಿಯಲ್ಲಿ ಕೀಟಗಳ ಪಾತ್ರ ! Role of Insects in Organic Farming

ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.

Related Posts

Leave a Reply

Your email address will not be published. Required fields are marked *